ಚೆನ್‍ಲಾ
ಈಗಿನ ಕಾಂಬೋಡಿಯ ಪ್ರದೇಶದಲ್ಲಿ ಸು. 550-802ರ ಅವಧಿಯಲ್ಲಿ ಪ್ರವರ್ಧಮಾನವಾಗಿದ್ದ ರಾಜ್ಯ. ಈ ರಾಜ್ಯವನ್ನಾಳುತ್ತಿದ್ದ ಈಶಾನವರ್ಮನ್ ಎಂಬ ದೊರೆ 616 ಅಥವಾ 617ರಲ್ಲಿ ಚೀನಕ್ಕೆ ರಾಯಭಾರಿಯನ್ನು ಕಳಿಸಿದನೆಂದು ಉಲ್ಲೇಖವಿದೆ. ಇತಿಹಾಸದಲ್ಲಿ ಚೆನ್‍ಲಾದ ಹೆಸರು ಮೊಟ್ಟ ಮೊದಲ ಬಾರಿಗೆ ಉಲ್ಲೇಖವಾಗಿದ್ದು ಆಗಲೇ. ಚೆನ್‍ಲಾ ಮೊದಲು ಪೂನಾನ್ ರಾಜ್ಯಕ್ಕೆ ಅಧೀನವಾಗಿತ್ತೆಂದೂ ಚಿತ್ರಸೇನ ಪೂನಾನ್ ಮೇಲೆ ದಂಡೆತ್ತಿ ಹೋಗಿ ಅದನ್ನು ಪರಾಜಯಗೊಳಿಸಿದನೆಂದೂ ಹೇಳಲಾಗಿದೆ. ಚೆನ್‍ಲಾಪ್ರದೇಶವೇ ಕಾಂಬೋಡಿಯವೆಂದು ಪಾಲ್ ಪೆಲಿಯೋ ಎಂಬ ಪೌರಸ್ತ್ಯ ಇತಿಹಾಸತಜ್ಞ ಅಭಿಪ್ರಾಯಪಟ್ಟಿದ್ದಾನೆ. ಚೆನ್‍ಲಾದ ರಾಯಭಾರಿಯನ್ನು ಚೀನಕ್ಕೆ ಕಳುಹಿಸುವ ವೇಳೆಗಾಗಲೇ ಆ ರಾಜ್ಯಕ್ಕೆ ಬಹುಶಃ ಸುಮಾರು ಇನ್ನೂರು ವರ್ಷಗಳ ಇತಿಹಾಸವಿತ್ತೆಂದು ತಿಳಿದುಬರುತ್ತದೆ. ಅದರ ಮೊದಲನೆಯ ರಾಜವಂಶ ಅಳಿದು, ಇನ್ನೊಂದು ರಾಜವಂಶ ಆಳುತ್ತಿತ್ತು. ಬಹುಶಃ ಇದು ವಿದೇಶಿ ವಂಶ. ಈ ವಂಶದ ಮೂರನೆಯ ದೊರೆಯೇ ಈಶಾನ ವರ್ಮನ್. ಚೆನ್‍ಲಾದ ಮೊದಲ ನೆಲೆ ಇದ್ದದ್ದು ಮೇಕಾಂಗ್ ನದಿಯ ಮೇಲಣ ಬಸಾಕ್ ಪ್ರದೇಶದಲ್ಲಿ ಅದು ಈಗಿನ ಲವೋಸಿನ ಅಗ್ನೇಯ ಭಾಗ. ಚೆನ್‍ಲಾದ ಮೊದಮೊದಲ ದೊರೆಗಳು ದಕ್ಷಿಣಾಭಿಮುಖವಾಗಿ ರಾಜ್ಯ ವಿಸ್ತರಿಸಿದರು. ಭವವರ್ಮ ಹಾಗೂ ಚಿತ್ರಸೇನರು ಫೂನಾನ್ ಪ್ರದೇಶವನ್ನು, ಮುನ್ ನದೀ ಕಣಿವೆಯ ಕೆಳಭಾಗವನ್ನು ಮತ್ತು ತಾನ್‍ಲಾ ಸ್ಯಾಪ್ ಸರೋವರಕ್ಕೆ ದಕ್ಷಿಣದಲ್ಲಿರುವ ಪ್ರದೇಶದ ಸ್ವಲ್ಪ ಭಾಗವನ್ನು ಆಕ್ರಮಿಸಿಕೊಂಡರು. ಈಶಾನಸೇನ ತಾನ್‍ಲಾ ಸ್ಯಾಪಿನ ಉತ್ತರಭಾಗವನ್ನು ಮತ್ತು ಪ್ರಾಯಶಃ ಈಗಿನ ಪೂರ್ವ ಸೈಯಾಮ್ ಪ್ರದೇಶವನ್ನು ವಶಪಡಿಸಿಕೊಂಡ. 7ನೆಯ ಶತಮಾನದ ಮಧ್ಯಭಾಗದಲ್ಲಿ ದ್ವಾರಾವತೀ (ಮೀನಾಮ್ ನದೀ ಕಣಿವೆಯ ಕೆಳಭಾಗ), ಮಹಾಚಂಪ-ಇವುಗಳ ನಡುವಣ ಪ್ರದೇಶ ಈಶಾನಪುರಕ್ಕೆ (ಚೆನಾಲಾ) ಸೇರಿತ್ತೆಂದು ಹ್ಯುಯೆನ್ ತ್ಸಾಂಗ್ ಹೇಳುತ್ತಾನೆ. ಎಂಟನೆಯ ಶತಮಾನದ ಆದಿಕಾಲದಲ್ಲಿ ಈಶಾನ್ಯದಲ್ಲಿ ಅನ್ನಾಂ ರಾಜ್ಯವೂ ಉತ್ತರದಲ್ಲಿ ನಾನ್ ಚಾವೊವೂ (ತೈ ರಾಜ್ಯ) ಇದರ ಎಲ್ಲೆಗಳಾಗಿದ್ದುವೆಂದೂ ಆದರೆ ಪೂನಾನ್ ಆಶ್ರಿತ ರಾಜ್ಯಗಳು ಬಹುಶಃ ಇದಕ್ಕೆ ಸೇರಿರಲಿಲ್ಲವೆಂದೂ ಹೇಳಲಾಗಿದೆ. ಇದರ ಉತ್ತರ ಭಾಗ ಪರ್ವತಗಳಿಂದಲೂ ಕಣಿವೆಗಳಿಂದಲೂ ದಕ್ಷಿಣ ಭಾಗ ನದಿಗಳಿಂದಲೂ ಸರೋವರಗಳಿಂದಲೂ ಕೂಡಿತ್ತು. ತಗ್ಗಾದ ದಕ್ಷಿಣ ಭಾಗ ವರ್ಷೇ ವರ್ಷೇ ಪ್ರವಾಹದ ಅನಾಹುತಕ್ಕೆ ತುತ್ತಾಗುತ್ತಿತ್ತು.

ಚೆನ್‍ಲಾದ ಮೂಲನಿವಾಸಿಗಳು ಮಾನ್ ಜನಗಳಿರಬಹುದು. ಖ್ಮೆರ್‍ಗಳು ಬಹುಶಃ ಇವರೊಡನೆ ಬೆರೆತುಕೊಂಡಿರಬೇಕು. ಖೈರ್ ಜನರು ಚಾಮ್‍ಗಳಿಂದ ಈ ಪ್ರದೇಶವನ್ನು ಗೆದ್ದುಕೊಂಡರೆಂಬುದು ಪ್ರಾಚೀನ ಐತಿಹ್ಯಗಳಿಂದಲೂ ಅನಂತರದ ಉದಂತಗಳಿಂದಲೂ ತಿಳಿದುಬುರತ್ತದೆ. ಭಾರತದ ಕೋರಮಂಡಲ ತೀರದಿಂದ ವ್ಯಾಪಾರಿಗಳೂ ವಿದ್ವಾಂಸರೂ ಇಲ್ಲಿ ಬಂದು ನೆಲೆಸಿ ಭಾರತೀಯ ಧರ್ಮಗಳ ಪ್ರಚಾರಕ್ಕೆ ಕಾರಣರಾದರು. ಮೊದಲು ಇವರು ಫೂನಾನ್ ಪ್ರಭುತ್ವಕ್ಕೆ ಸಾಮಂತರಾಗಿದ್ದರು. ಇಲ್ಲಿಯ ಜನರನ್ನು ವಿಮೋಚನೆಗೊಳಿಸಿದವನು ಶ್ರುತವರ್ಮನ್.

 	ಖ್ಮೆರ್ ಜನ ಇಲ್ಲಿಗೆ ಬರುವುದಕ್ಕೂ ಮುಂಚಿನಿಂದಲೂ ಭಾರತೀಯ ಧರ್ಮಗಳು ಇಲ್ಲಿ ಪ್ರಚಾರದಲ್ಲಿದ್ದಿರಬೇಕು. ಬೌದ್ಧ, ಶೈವ, ವೈಷ್ಣವಧರ್ಮಗಳು ಈ ದೇಶದಲ್ಲಿ ಪ್ರಚಾರದಲ್ಲಿದ್ದುವೆಂಬುದು ಇಲ್ಲಿ ಉಪಲಬ್ಧವಿರುವ, ನಿರ್ದಿಷ್ಟ ಸರಳ ಸಂಸ್ಕøತ ಭಾಷೆಯಲ್ಲಿ ರಚಿತವಾದ, ಶಾಸನಗಳಿಂದ ತಿಳಿದುಬರುತ್ತದೆ. ಶಾಸನಗಳನ್ನು ಪಲ್ಲವ ಹಾಗೂ ಬಾದಾಮಿ ಚಾಳುಕ್ಯರ ಕಾಲದ ಲಿಪಿಯಲ್ಲಿ ಕೆತ್ತಲಾಗಿದೆ. ಭಾರತೀಯ ಪುರಾಣ, ಕಾವ್ಯ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ವೈದ್ಯ ಗ್ರಂಥಗಳು ಹಾಗೂ ತತ್ತ್ವಶಾಸ್ತ್ರ ಗ್ರಂಥಗಳು ಇಲ್ಲಿಯವರೆಗೆ ವ್ಯಾಪಕವಾಗಿ ಪರಿಚಯವಿದ್ದುವೆಂಬುದು ಈ ಶಾಸನಗಳಿಂದ ತಿಳಿದುಬರುತ್ತದೆ. ಧಾರ್ಮಿಕ ಕ್ಷೇತ್ರವೇ ಅಲ್ಲದೆ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲೂ ಭಾರತದ ಪ್ರಭಾವ ವಿಶೇಷವಾಗಿತ್ತು. ಚೆನ್‍ಲಾದ ವಾಸ್ತು ಹಾಗೂ ಮೂರ್ತಿಶಿಲ್ಪಗಳು ಭಾರತದ ಸಂಪರ್ಕದಿಂದ ರೂಪುಗೊಂಡುವು. ಇಟ್ಟಿಗೆ ಮತ್ತು ಕಲ್ಲುಗಳಿಂದ ಚತುರಸ್ರ ಹಾಗೂ ಸಮ ಚತುರಸ್ರ ಆಕಾರಗಳಲ್ಲಿ ದೇವಾಲಯದ ಕಟ್ಟಡಗಳು ಅಲ್ಲಿ ನಿರ್ಮಾಣವಾದುವು. ವಾಟ್ ಪು, ಸಾಂಬೋರ ಪ್ರೇಕುಕ್, ಹ್ಯಾಂಜೆ, ಪ್ರಸಾತ್ ಬಯಾಂಗ್ ಮೊದಲಾದ ದೇವಾಲಯಗಳು ಚೆನ್‍ಲಾ ವಾಸ್ತುವಿನ ಉತ್ತಮ ಮಾದರಿಗಳು. ಅತ್ಯಂತ ಸುಂದರವಾದ ಅರೆ ಉಬ್ಬು ಚಿತ್ರಗಳು, ದ್ವಾರಬಂಧ ಹಾಗೂ ಕಂಬಗಳ ಮೇಲೆ ಎತ್ತಿಹಿಡಿದಂತೆ ಕಾಣುವ ಮನೋಜ್ಞವಾದ ಮೂರ್ತಿಗಳು ನಿರ್ಮಾಣವಾದವು. ಹರಿಹರ ವಿಗ್ರಹಗಳು ಅತ್ಯಂತ ಸುಂದರವಾಗಿವೆ; ಪ್ರಾಮುಖ್ಯಗಳಿಸಿವೆ. ಬುದ್ಧ, ವಿಷ್ಣು, ಸ್ತ್ರೀ ಹಾಗೂ ಪುರುಷ ಮೂರ್ತಿಗಳನ್ನು ಅತ್ಯಂತ ನಾಜೂಕಾಗಿ ಬಿಡಿಸಲಾಗಿದೆ. ಚೊಕ್ಕ, ಉದ್ದನೆಯ, ಬಿಗಿಯಾದ, ಅಂಚುಗಳಿಂದ ಕೂಡಿದ, ಉಡುಪುಗಳನ್ನು ಧರಿಸಿರುವ ಸ್ತ್ರೀವಿಗ್ರಹಗಳು ಚೆನ್‍ಲಾ ದೇಶೀಯ ಶೈಲಿಯ ವಿಶಿಷ್ಟ ಶಿಲ್ಪಗಳು.
(ಎಸ್.ವಿ.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ